ಹಿರೇಕ್ಲಿಟೀಸ್
	ಕ್ರಿಪೂ. 500. ಪ್ರಸಿದ್ಧ ಗ್ರೀಕ್ ತತ್ವಶಾಸ್ತ್ರಜ್ಞ. ಇವನು ಏಷ್ಯಾ ಮೈನರಿನ ಎಫೆಸಸ್ ಎಂಬಲ್ಲಿ ಜೀವಿಸಿದ್ದ (ಇಂದಿನ ಟರ್ಕಿ). ಇವನು 130 ಸೂತ್ರಗಳ ಕೃತಿಯನ್ನು ರಚಿಸಿದ್ದ. ಜನರಿಗೆ ಅಂತಿಮ ಸತ್ಯವನ್ನು ತಿಳಿಸುವುದಾಗಿ ಇವನು ಘೋಷಿಸಿಕೊಂಡಿದ್ದ. ಇದನ್ನು ಅರ್ಥಮಾಡಿಕೊಳ್ಳಲು ವಿಫಲರಾದ ಜನರು ಈತ ಹೇಳಿದ ಸತ್ಯವನ್ನು ಅಲ್ಲಗಳೆದರು. ಇವನು ಹೇಳಿದ ಸತ್ಯತತ್ತ್ವಗಳು `ಲೋಗೋಸ್ ಎಂದು ಹೆಸರಾಗಿವೆ. ಇವನ ಪ್ರಕಾರ ಪ್ರಪಂಚದ ಎಲ್ಲ ವಸ್ತುಗಳು ನಿರಂತರವಾಗಿ ಬದಲಾಗುತ್ತಿವೆ ಹಾಗೂ ಚಲಿಸುತ್ತಿವೆ. ಇದನ್ನು ಇವನು ಕಲಹ(ಕಡಿದಾಟ) ಎಂದು ಕರೆದ. ಮುಗಿಯದ ಈ ಕ್ರಿಯೆ ಬಿಸಿ ಮತ್ತು ತಂಪಿನಂತಹ ಎಲ್ಲ ವಿರುದ್ಧ ಶಕ್ತಿಗಳನ್ನು ಒಗ್ಗೂಡಿಸುತ್ತದೆ ಎಂದು ಇವನು ನಂಬಿದ್ದ. ಇದು ಸೂಕ್ಷ್ಮಸಮತೋಲನ ಹೊಂದಿರುತ್ತದೆ ಎಂದು ಹೇಳಿದ. ಈ ಪರಿಕಲ್ಪನೆಯನ್ನು ವಿರುದ್ಧ ಶಕ್ತಿಗಳ ಐಕ್ಯವೆಂದು ತಿಳಿಯಲಾಗಿದೆ. ಇವನ ಪ್ರಕಾರ ಈ ಐಕ್ಯ ಮತ್ತು ಕಲಹ ವಿಶ್ವವನ್ನು ಮತ್ತು ಮಾನವ ಬದುಕನ್ನು ನಿಯಂತ್ರಿಸುತ್ತವೆ. ಈ ಐಕ್ಯ ಅತ್ಯಂತ ಸಹಜವಾಗಿ ಮತ್ತು ಉದ್ದೇಶಪೂರ್ವಕವಾಗಿ ಹುಟ್ಟು-ಸಾವು, ಎಚ್ಚರ-ನಿದ್ರೆಗಳಂತಹ ಸಂದರ್ಭಗಳಲ್ಲಿ ಕಾಣಿಸಿಕೊಳ್ಳುತ್ತದೆ. ಪ್ರಪಂಚ ಬೆಂಕಿಯಿದ್ದಂತೆ, ಇದು ಚಿರಸತ್ಯದ ಜೀವಂತ ಸಂಕೇತವಿದ್ದಂತೆ ಎಂದು ಇವನು ಪ್ರತಿಪಾದಿಸಿದ. ಆತ್ಮ ಉಜ್ಜ್ವಲವಾದುದು ಎಂದು ನಂಬಿದ್ದ. ಇವನ ಅನಂತರ ಸ್ಟೋಯಿಕರು ಈ ತತ್ತ್ವವನ್ನು ಮುಂದುವರಿಸಿದರು.
												(ಎಚ್.ಡಿ.ಎಲ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ